ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಯಕ್ಷಗಾನ ಕಲಾರಂಗದ ತಾಳಮದ್ದಲೆ ಸಪ್ತಾಹ ಯಜ್ಞಾಶ್ವದ ಸಪ್ತಕೂಟ ಸಂಚಲನ

ಲೇಖಕರು :
ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ
ಶುಕ್ರವಾರ, ಜೂನ್ 20 , 2014
ಉಡುಪಿಯ ಯಕ್ಷಗಾನ ಕಲಾರಂಗವು ಕಳೆದ ಹದಿನೈದು ವರ್ಷ ಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹವು ಇತ್ತೀಚೆಗೆ ರಾಜಾಂಗಣದಲ್ಲಿ ಯಶಸ್ವಿಯಾಗಿ ಜರಗಿ ಪೌರಾಣಿಕ ಲೋಕದ ಅನಾವರಣವು ಸಾರ್ಥಕವಾಗಿ ಆಯಿತು. ಕರಾವಳಿಯಲ್ಲಿ ವಿಸ್ತರಿಸಿರುವ ಈ ಅನನ್ಯ ಕಲೆಯು ಕಲಾವಿದರ ಸಾಹಿತ್ಯಿಕ ಒಲುಮೆಯಿಂದಲೇ ಪರಿಪುಷ್ಟ ವಾದುದು. ಈ ಕಲಾಪರಂಪರೆಯ ಉಳಿವಿಗೆ ಮತ್ತು ಬೆಳವಣಿಗೆಗೆ ಉಡುಪಿಯ ಕಲಾರಂಗದ ಕೊಡುಗೆ ಅನನ್ಯ. 2014 ಮೇ 20ರಿಂದ 26ರ ತನಕ ಜರಗಿದ ಈ ಏಳು ತಾಳಮದ್ದಳೆಗಳನ್ನು ``ಪಾಂಡವಾಶ್ವಮೇಧ`` ಎಂಬ ಶೀರ್ಷಿಕೆಯ ಅಡಿಯಲ್ಲಿ ಸಂಘಟಿಸಲಾಗಿತ್ತು.

ಆ ಏಳು ದಿನಗಳು

ಮೊದಲ ದಿನ ಪ್ರಸ್ತುತಗೊಂಡ ಯಾಗ ಸಂಕಲ್ಪ ಮತ್ತು ಅನುಸಾಲ್ವ ಕಾಳಗ ಪ್ರಸಂಗವು ಪಾಂಡವಾಶ್ವಮೇಧ ಪ್ರಸಂಗಗಳ ಸರಣಿಗೆ ಪೀಠಿಕೆಯಾಗಿಯೇ ಮೂಡಿಬಂತು. ವಾರಣವದನ ಸ್ತುತಿ ಪದ್ಯದಿಂದ ಆರಂಭಿಸಿದ ಭಾಗವತ ರಾಮಕೃಷ್ಣ ಹೆಗಡೆಯವರು ಪರಮೇಶ್ವರ ಭಂಡಾರಿ ಹಾಗೂ ಶಿವಾನಂದ ಕೋಟ ಇವರ ಮದ್ದಳೆ ಧಿ - ಚೆಂಡೆ ವಾದನದೊಂದಿಗೆ ಉತ್ತಮ ಹಿಮ್ಮೇಳ ವನ್ನೊದಗಿಸಿದರು. ಧರ್ಮರಾಯನ ಪಾತ್ರದಲ್ಲಿ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ಹಾಗೂ ವೇದವ್ಯಾಸನ ಪಾತ್ರದಲ್ಲಿ ಮಲ್ಪೆ ವಾಸುದೇವ ಸಾಮಗರು ಬಂಧುಹತ್ಯಾ ದೋಷದ ನಿವಾರಣಾರ್ಥ ಅಶ್ವಮೇಧ ಯಾಗವನ್ನು ಮಾಡುವ ಅಗತ್ಯತೆಯ ತಾತ್ವಿಕ ಚಿಂತನೆಯನ್ನು ಮಾಡಿದರು. ಭೀಮನಾಗಿ ಶಂಭು ಶರ್ಮ ಹಾಗೂ ಕೃಷ್ಣನಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್‌ ಇವರು ಪಾತ್ರೋಚಿತವಾದ ತರ್ಕ ಮತ್ತು ಸಮಾಧಾನದ ಮಾತುಗಳೊಂದಿಗೆ ರಂಜಿಸಿದರು. ಇನ್ನು ಅನುಸಾಲ್ವನಾಗಿ ಸರ್ಪಂಗಳ ಈಶ್ವರ ಭಟ್ಟರು ಸೂಕ್ತವಾದ ಮಂಡನೆಗಳೊಂದಿಗೆ ಕೃಷ್ಣನನ್ನು ಎದುರಿಸಿದರು. ವೃಷಕೇತುವಿನ ಪಾತ್ರ ವಹಿಸಿದ ರಮಣ ಆಚಾರ್ಯರು ಶ್ರಮವಹಿಸಿ "ಸೈ' ಎನಿಸಿದರು.

ಕರಾವಳಿಯಲ್ಲಿ ವಿಸ್ತರಿಸಿರುವ ಈ ಅನನ್ಯ ಕಲೆಯು ಕಲಾವಿದರ ಸಾಹಿತ್ಯಿಕ ಒಲುಮೆಯಿಂದಲೇ ಪರಿಪುಷ್ಟವಾದುದು.
ಎರಡನೆಯ ದಿನ ನೀಲಧ್ವಜ ಕಾಳಗ ಪ್ರಸಂಗದ ಪ್ರಸ್ತುತಿಯಾಯಿತು. ಭಾಗವತರಾಗಿ ಪದ್ಯಾಣ ಗಣಪತಿ ಭಟ್‌, ಮದ್ದಳೆವಾದನದಲ್ಲಿ ವಿನಯ ಆಚಾರ್ಯ ಕಡಬ ಹಾಗೂ ಚಂಡೆ ವಾದನದಲ್ಲಿ ದಯಾನಂದ ಮಿಜಾರು ಇವರು ಭಾಗವಹಿಸಿ ರಂಜನೀಯವಾದ ಹಿಮ್ಮೇಳವನ್ನು ನೀಡಿದರು. ನೀಲಧ್ವಜನಾಗಿ ಯಲ್ಲಾಪುರದ ಎಂ.ಎನ್‌. ಹೆಗಡೆಯವರು ಸಾಂಪ್ರದಾಯಿಕ ಶೈಲಿಯಲ್ಲಿ ಪೀಠಿಕೆಯ ಮಾತುಗಳನ್ನಾಡಿದರು. ಅರ್ಜುನನಾಗಿ ನಿಸ್ರಾಣಿ ರಾಮಚಂದ್ರ ಹೆಗಡೆಯವರು ವಿಶಿಷ್ಟವಾದ ನಗು ಹಾಗೂ ದೇಹಭಾಷೆಗಳನ್ನು ಉಪಯೋಗಿಸಿ ಉತ್ತಮ ಪಾತ್ರ ನಿರ್ವಹಣೆ ಮಾಡಿದರು. ಪ್ರವೀರನ ಪಾತ್ರ ನಿರ್ವಹಿಸಿದ ರಾಮ ಜೋಯಿಸ್‌ ಬೆಳ್ಳಾರೆ ಯುವ ಪಾತ್ರಕ್ಕೆ ಸಹಜವಾದ ವೀರಾವೇಶದ ಮಾತುಗಳಿಂದ ರಂಜಿಸಿದರು. ಜ್ವಾಲೆಯ ಪಾತ್ರವನ್ನು ನಿರ್ವಹಿಸಿದ ಹಿರಿಯ ಕಲಾವಿದ ಡಾ| ಕೊಳ್ಯೂರು ರಾಮಚಂದ್ರರಾಯರು ವಿಕ್ಷಿಪ್ತ ವ್ಯಕ್ತಿತ್ವಗಳಲ್ಲಿ ಕಾಣುವ ಭಾವ-ರಾಗ ಸ್ಫೋಟದ ನಿಜ ದರ್ಶನ ನೀಡಿದರು. ಅಂಬಿಗನ ಪಾತ್ರ ನಿರ್ವಹಿಸಿದ ಕೆ. ಸುರೇಶ ಜ್ವಾಲೆಯೊಂದಿಗೆ ಪೂರಕ ಮಾತುಗಳಿಂದ ಮನಗೆದ್ದರು. ಇನ್ನು ಗಂಗೆಯ ಪಾತ್ರದಲ್ಲಿ ಎಂ.ಕೆ. ರಮೇಶ ಆಚಾರ್ಯರು ಚೆನ್ನಾಗಿ ನಿರ್ವಹಿಸಿದರು.

ಮೂರನೆಯ ದಿನ ಜರಗಿದ್ದು ಸುಧನ್ವ ಕಾಳಗ. ಹಿಮ್ಮೇಳದಲ್ಲಿ ದ್ವಂದ್ವ ಭಾಗವತಿಕೆ ಇದ್ದ ಒಂದೇ ಒಂದು ಪ್ರದರ್ಶನವಿದು. ಹಿರಿಯರಾದ ನೆಬ್ಬೂರು ನಾರಾಯಣ ಹೆಗಡೆ ಹಾಗೂ ವಿದ್ವಾನ್‌ ಗಣಪತಿ ಭಟ್ಟರು ಪರಸ್ಪರ ಪೂರಕವಾಗಿ ಪ್ರಭಾವಶಾಲಿಯಾಗಿ ಹಾಡಿ ಇಡೀ ಪ್ರಸಂಗದ ಪ್ರಸ್ತುತಿಗೆ ಉತ್ತಮ ಅಸ್ತಿವಾರ ಹಾಕಿದರು. ಮದ್ದಲೆ ವಾದನದಲ್ಲಿ ಕೃಷ್ಣ ಯಾಜಿ ಇಡಗುಂಜಿ ಹಾಗೂ ಚಂಡೆಯಲ್ಲಿ ಪ್ರಶಾಂತ ಭಂಡಾರಿಯವರು ಉತ್ತಮ ವಾಗಿ ಸಾಥ್‌ ನಿಡಿದರು. ಸುಧನ್ವನ ಪಾತ್ರಕ್ಕೆ ತಕ್ಕಂತೆ ಭಕ್ತಿ ಹಾಗೂ ವೀರ ಭಾವ ಗಳನ್ನು ಸಾಹಿತ್ಯ ಮತ್ತು ತಾತ್ವಿಕ ಚಿಂತನೆಗಳ ಮಾತುಗಾರಿಕೆಯ ಮೂಲಕ ಉಮಾಕಾಂತ ಭಟ್‌ ಅವರು ಪರಿಣಾಮಕಾರಿಯಾಗಿ ನಿರ್ವಹಿಸಿದರು. ಇನ್ನು ಪ್ರಭಾವತಿಯಾಗಿ ದಿವಾಕರ ಹೆಗಡೆಯವರು ಪ್ರಬುದ್ಧ ಸಂಭಾಷಣೆಯ ಮೂಲಕ ಗಮನ ಸೆಳೆದರು. ಅರ್ಜುನನಾಗಿ ವಾಸುದೇವ ರಂಗಾ ಭಟ್‌ ಧ್ವನಿಪೂರ್ಣವಾದ ಅರ್ಥಗಾರಿಕೆಯಿಂದ ರಂಜಿಸಿದರೆ ಕೃಷ್ಣನಾಗಿ ಸಂಕದಗುಂಡಿ ಗಣಪತಿ ಭಟ್‌ ಅವರು ಉತ್ತಮ ನಿರ್ವಹಣೆ ನೀಡಿದರು.

ನಾಲ್ಕನೇಯ ದಿನದ ಪ್ರಸಂಗ ಪ್ರಮೀಳಾರ್ಜುನ ಮತ್ತು ಘೋರ ಭೀಷಣ ಕಾಳಗ. ಭಾಗವತರಾಗಿ ಪಟ್ಲ ಸತೀಶ್‌ ಕುಮಾರ ಶೆಟ್ಟಿ, ಚೆಂಡೆ ಮದ್ದಳೆಯಲ್ಲಿ ಪಡ್ರೆ ಆನಂದ ಮತ್ತು ಗುರುಪ್ರಸಾದ ಬೊಳಿಂಜಡ್ಕ ಪರಿಪುಷ್ಟವಾದ ಹಿಮ್ಮೇಳ ಒದಗಿಸಿದರು. ಪ್ರಮೀಳೆಯ ಪಾತ್ರದಲ್ಲಿ ಭರವಸೆಯ ಅರ್ಥಧಾರಿಯಾಗಿ ಯುವಕಲಾವಿದ ಪ್ರದೀಪ ವಿ. ಸಾಮಗ ಕಾಣಿಸಿಕೊಂಡರು. ವೈಕುಂಠ ಹೇಳೆಯವರು ದೂತಿಯ ಪಾತ್ರವನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಿದರು. ಅರ್ಜುನನ ಪಾತ್ರದಲ್ಲಿ ರಾಧಾಕೃಷ್ಣ ಕಲ್ಚಾರ್‌ ಅವರು ಪಾತ್ರ ಗೌರವಕ್ಕೆ ಪ್ರಾಮುಖ್ಯ ನೀಡಿ ಮಾತನಾಡಿದರು. ಘೋರ ಭೀಷಣನ ಪಾತ್ರದಲ್ಲಿ ವೆಂಕಟ್ರಾಂ ಭಟ್‌ ಸುಳ್ಯ ಹಾಗೂ ಮೇದೋಹೋತನ ಪಾತ್ರದಲ್ಲಿ ಸದಾನಂದ ಶರ್ಮರು ತಮ್ಮ ಮಾತುಗಳ ಮಂಟಪದಿಂದಲೇ ರಂಜನೆ ನೀಡಿದರು.

ಪಾಂಡವಾಶ್ವಮೇಧ ಪ್ರಸಂಗ ಸರಣಿಯಲ್ಲಿ ರಂಗ ಸ್ಥಳದಲ್ಲಿ ಹೆಚ್ಚು ಪ್ರದರ್ಶನಗೊಳ್ಳುವ ಬಭ್ರುವಾಹನ ಪ್ರಸಂಗದ ತಾಳಮದ್ದಳೆಯು ಐದನೇ ಪ್ರದರ್ಶನವಾಗಿ ಜರಗಿತು. ಪುತ್ತಿಗೆ ರಘುರಾಮ ಹೊಳ್ಳರು ಭಾವಶುದ್ಧಿ ಮತ್ತು ಅರ್ಥಶುದ್ಧಿಯಿಂದ ಸ್ಫುಟವಾಗಿ ಹಾಡಿದ್ದು ತಾಳಮದ್ದಳೆಯ ಆಕರ್ಷಣೆಯನ್ನು ಹೆಚ್ಚಿಸಿತು. ಅವರೊಂದಿಗೆ ಮದ್ದಳೆಯಲ್ಲಿ ಅಡೂರು ಗಣೇಶ ರಾವ್‌ ಹಾಗೂ ಚೆಂಡೆಯಲ್ಲಿ ವಗೆನಾಡು ಪ್ರಶಾಂತ ಶೆಟ್ಟಿ ಸಮರ್ಥ ಹಿಮ್ಮೇಳ ನೀಡಿದರು.

ಯುವ ಪಾತ್ರಕ್ಕೆ ಸಹಜವಾದ ವೀರೋಚಿತ ಹಾಗೂ ವಿವೇಕಯುತ ಮಾತುಗಳಿಂದ ಬಭ್ರುವಾಹನನ ಪಾತ್ರದಲ್ಲಿ ವಾಸುದೇವ ರಂಗಾಭಟ್ಟರು ರಂಜಿಸಿದರು. ಮಂತ್ರಿಯಾಗಿ ಮಾತಾಡಿದ ವಾದಿರಾಜ ಕಲ್ಲೂ ರಾಯರು ಕಿರಿಯರಾಗಿ ಹಿರಿಯ ಹರೆಯದ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದರು. ದೂತಿ ಮತ್ತು ಹಂಸಧ್ವಜನ ಪಾತ್ರಗಳನ್ನು ನಿರ್ವಹಿ ಸಿದ ಪಶುಪತಿ ಶಾಸ್ತ್ರಿಯವರು ಆಯಾ ಪಾತ್ರಗಳ ಸ್ವಭಾವಕ್ಕೆ ತಕ್ಕಂತೆ ಸಾಹಿತ್ಯವನ್ನು ಬಳಸಿ ಮಾತಾಡಿದರು. ಚಿತ್ರಾಂಗದೆಯ ಪಾತ್ರದಲ್ಲಿ ವಾಸುದೇವ ಸಾಮಗರು ಪಾತ್ರೋಚಿತವಾಗಿ ತವಕ, ತಲ್ಲಣ, ಸಿಟ್ಟು, ಸಮಾಧಾನದ ಮಾತುಗಳಿಂದ ಚೊಕ್ಕವಾದ ನಿರ್ವಹಣೆ ಮಾಡಿದರು. ಅರ್ಜುನನ ಪಾತ್ರದಲ್ಲಿ ಕೆ. ಗೋವಿಂದ ಭಟ್ಟರು ತಮ್ಮ ವಯೋ ಸಹಜವಾದ ಅನುಭವ ಹಾಗೂ ಪ್ರೌಢಿಮೆಗಳಿಂದ ಕಾಣಿಸಿಕೊಂಡರು. ಚುರುಕು ಮಾತು ಹಾಗೂ ಸ್ಫುಟವಾಗಿ ಕತೆಯನ್ನು ಕಟ್ಟಿಕೊಡುವ ಸಾಮರ್ಥ್ಯ ಇರುವ ವಿಷ್ಣು ಶರ್ಮರು ಕೃಷ್ಣನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರು.

ಸರಣಿಯ ಆರನೇ ದಿನ ತಾಮ್ರಧ್ವಜ ಕಾಳಗ ಪ್ರಸಂಗದ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕುರಿಯ ಗಣಪತಿ ಶಾಸ್ತ್ರಿಯವರು ತಮ್ಮ ಅನುಭವ ಮತ್ತು ಪಾಂಡಿತ್ಯದಿಂದ ಪ್ರಸಂಗವನ್ನು ಚೆನ್ನಾಗಿ ನಡೆಸಿ ಕೊಟ್ಟರು. ಮದ್ದಳೆ ವಾದನದಲ್ಲಿ ಅಡೂರು ಲಕ್ಷ್ಮೀನಾರಾಯಣ ರಾವ್‌ ಹಾಗೂ ಚೆಂಡೆಯಲ್ಲಿ ಕುದ್ರೆಕೋಡ್ಲು ರಾಮ ಮೂರ್ತಿಯವರು ಸಹಕರಿಸಿದರು. ತಾಮ್ರಧ್ವಜನ ಪಾತ್ರ ದಲ್ಲಿ ತನ್ನ ಪ್ರಭಾವಶಾಲಿಯಾದ ಧ್ವನಿ ಮತ್ತು ದೀರ್ಘ‌ ವಾಕ್ಯಗಳ ವೇಗದ ಪೋಣಿಸುವಿಕೆಯಿಂದ ಜಬ್ಟಾರ್‌ ಸಮೋ ಗಮನ ಸೆಳೆದರು. ಚಾಟೂಕ್ತಿಗಳ ಸರದಾರರಾದ ಡಾ| ರಮಾನಂದ ಬನಾರಿಯವರ ಕೃಷ್ಣನ ಪಾತ್ರ ನಿರ್ವಹಣೆ ಮನೋಜ್ಞವಾಗಿತ್ತು. ಅರ್ಜುನನ ಪಾತ್ರಕ್ಕೆ ಉಚಿತವೆನ್ನುವ ಮಾತುಗಾರಿಕೆಯಿಂದ ಪೆರ್ಮುದೆ ಜಯಪ್ರಕಾಶ ಶೆಟ್ಟಿ ಗುರುತಿಸಲ್ಪಟ್ಟರು. ಇನ್ನು ಮಯೂರಧ್ವಜನ ಪಾತ್ರದಲ್ಲಿ ಹಿರಿಯ ಅರ್ಥಧಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಯವರು ಭಾವಪೂರ್ಣವೂ ಸಾಹಿತ್ಯಪೂರ್ಣವೂ ಆದ ವಿಚಾರಗಳ ಮಂಡನೆ ಮಾಡಿದರು. ಕುಮುದ್ವತಿ ಯಾಗಿ ಪಾತ್ರ ನಿರ್ವಹಿಸಿದ ರವಿ ಅಲೆವೂರಾಯರು ಚಿಕ್ಕ-ಚೊಕ್ಕ ಮಾತುಗಳಿಂದ ಗಮನ ಸೆಳೆದರು.

ಸಪ್ತಾಹದ ಕೊನೆಯ ತಾಳಮದ್ದಳೆಯಾಗಿ ಮೂಡಿ ಬಂದದ್ದು ವೀರವರ್ಮ ಕಾಳಗ. ಭಾಗವತರಾಗಿ ತೋನ್ಸೆ ಜಯಂತ ಕುಮಾರ್‌, ಮದ್ದಲೆವಾದಕರಾಗಿ ಶಶಿ ಕುಮಾರ ಆಚಾರ್ಯ ಹಾಗೂ ಚೆಂಡೆವಾದನದಲ್ಲಿ ಸುರೇಶ ಕುಮಾರ್‌ ಸಹಕರಿಸಿದರು. ವೀರವರ್ಮನಾಗಿ ಅನುಭವೀ ಅರ್ಥಧಾರಿಯಾದ ಡಾ| ಎಂ. ಪ್ರಭಾಕರ ಜೋಶಿಯವರು ವೀರಭಕ್ತಿಯುಳ್ಳ ಅನನ್ಯ ಸಾಧಕನ ದೃಢ ಮನಸ್ಸಿನ ವ್ಯಕ್ತಿತ್ವವನ್ನು ಸುಂದರವಾಗಿ ನಿರೂಪಿಸಿದರು. ಯಮನ ಪಾತ್ರದಲ್ಲಿ ಸೂಕ್ತ ನಿರ್ವಹಣೆಯಿಂದ ಬರೆ ಕೇಶವ ಭಟ್‌ ಅವರು ಗಮನ ಸೆಳೆದರು. ಶ್ರೀಕೃಷ್ಣನ ಪಾತ್ರದಲ್ಲಿ ಕುಂಬಳೆ ಸುಂದರ ರಾವ್‌ ಅವರು ಇಡೀ ಪ್ರಸಂಗವನ್ನು ನಡೆಸುವ ಚಾಕಚಕ್ಯತೆಯನ್ನು ತನ್ನ ಪ್ರಾಸ ಸಹಿತವಾದ ಹಾಗೂ ಅರ್ಥಗರ್ಭಿತವಾದ ಮಾತುಗಳಿಂದ ತೋರಿದರು. ಅರ್ಜುನನ ಪಾತ್ರ ಹೇಗಿರಬೇಕೋ ಹಾಗೆಯೇ ಮನಂಬುಗುವಂತೆ ಅಶೋಕ ಭಟ್‌ ಅವರು ನಿರ್ವಹಿಸಿದರು. ಹನುಮಂತನ ಪಾತ್ರವನ್ನು ನಿರ್ವಹಿಸಿದ ಶ್ರೀಧರ ಡಿ.ಎಸ್‌. ಅವರು ತಮ್ಮ ಪುರಾಣ ಜ್ಞಾನದ ಹೂರಣ ವನ್ನು ಸಮರ್ಥವಾಗಿ ಬಳಸಿದರು.

ಅವಧಿಯ ಮಿತಿ ಅಪಾಯವಲ್ಲ

ನಿಗದಿತ ಅವಧಿಯೊಳಗೆ ವಸ್ತು ಪ್ರತಿಪಾದನೆಯ ದೃಷ್ಟಿಯಿಂದ ಎಲ್ಲ ದಿನಗಳಲ್ಲೂ ಕಲಾವಿದರು ಉತ್ತಮ ನಿರ್ವಹಣೆ ತೋರಿದ್ದಾರೆ. ಪಾತ್ರಧಾರಿಗಳಿಗೆ ಹಿಮ್ಮೇಳದ ಪೋಷಣೆಯು ಚೆನ್ನಾಗಿಯೇ ದೊರಕಿದೆ. ಅರ್ಥಧಾರಿಗಳೂ ಪರಸ್ಪರ ವಾದ, ತರ್ಕ, ಶಾಸ್ತ್ರಧಾರ, ಲೋಕರೂಢಿ, ಮನೋ ಧರ್ಮ ಇತ್ಯಾದಿಗಳನ್ನು ಸಮರ್ಪಕವಾಗಿ ಬಳಸಿ ಸಂಭಾಷಣೆ ನಡೆಸಿದ್ದಾರೆ. ಸ್ವಯಂಸ್ಫೂರ್ತಿಯಿಂದ ಮಾತನಾಡುವ ಪಾತ್ರ ಧಾರಿಗೆ ಅವಧಿಯ ಮಿತಿ ಇರುವುದು ಅಪಾಯವಾಗುವುದಿಲ್ಲವೆಂಬುದು ಇಲ್ಲಿ ಸಿದ್ಧವಾಗಿದೆ. ಅದಕ್ಕಾಗಿ ಸಂಘಟಕರು ಪೂರ್ವಭಾವಿಯಾಗಿ ಸಿದ್ಧಪಡಿಸಿದ ಪದ್ಯಗಳ ಪಟ್ಟಿಯು ತುಂಬ ಉಪಯುಕ್ತ ವಾಯಿತು. ಕಾವ್ಯ ಮತ್ತು ಪುರಾಣಗಳನ್ನು ಏಕಕಾಲದಲ್ಲಿ ಬಳಸುವ ಏಕೈಕ ಕಲಾಪ್ರಕಾರವಾದ ತಾಳಮದ್ದಳೆಯಲ್ಲಿ ಭಾಗ ವಹಿಸಿದ ಕಲಾವಿದರೂ ಆಸ್ವಾದಿ ಸಿದ ಪ್ರೇಕ್ಷಕರೂ ಅವಲೋಕನಕಾರರೂ ಸಂಘಟಿಸಿದ ಕಲಾರಂಗದ ಶ್ರದ್ಧಾಳು ಗಳೂ ಧನ್ಯರು.



ಕೃಪೆ : http://www.udayavani.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ